ಚಾಲ್ರ್ಸ್ (ನೇಪಲ್ಸ್, ಸಿಸಿಲಿ ದೊರೆಗಳು)

ಚಾಲ್ರ್ಸ್ I : 1265-85ರಲ್ಲಿ ನೇಪಲ್ಸ್ ಮತ್ತು ಸಿಸಿಲಿಗಳ ದೊರೆಯಾಗಿದ್ದ. ಫ್ರಾನ್ಸಿನ 8ನೆಯ ಲೂಯಿಯ ಮಗ; 9ನೆಯ ಲೂಯಿಯ ತಮ್ಮ. ಜನನ 1226. ಅಂಜುವಿನ ಕೌಂಟ್ ಆಗಿದ್ದ ಈತ 1248ರಲ್ಲಿ ತನ್ನ ಸೋದರನ ಜೊತೆ ಧರ್ಮಸಂಬಂಧಿ ಯುದ್ಧದಲ್ಲಿ ಭಾಗವಹಿಸಿ ಈಜಿಪ್ಟಿಗೆ ಹೋಗಿದ್ದ. ಅಲ್ಲಿ ಅಣ್ಣನೊಂದಿಗೆ ಇವನೂ ಬಂಧನಕ್ಕೊಳಗಾದ. ಬಿಡುಗಡೆ ಹೊಂದಿದ ಮೇಲೆ 1257ರಲ್ಲಿ ಮರ್ಸಾಯನ್ನು ಗೆದ್ದಾಗ ಇವನಿಗೆ ಖ್ಯಾತಿ ಬಂತು. ಪೋಪ್ 4ನೆಯ ಕ್ಲೆಮೆಂಟನ ಆಮಂತ್ರಣದಂತೆ ಈತ ನೇಪಲ್ಸಿನ ಮೇಲೆ ದಂಡೆತ್ತಿ ಹೋಗಿ, ಹಾಹೆನ್‍ಸ್ಟಾಫೆನ್ ಮನೆತನದ ರಾಜರನ್ನು ಸೋಲಿಸಿ 1265ರಲ್ಲಿ ನೇಪಲ್ಸಿನ ದೊರೆಯಾದ. ಪೋಪನ ವಿಶ್ವಾಸ ಗಳಿಸಿದ್ದ ಯೂರೋಪಿನ ಆಗಿನ ಪ್ರಭಾವಿ ಅರಸರಲ್ಲಿ ಈತನೂ ಒಬ್ಬ. ಆದರೆ ಈತ ಕ್ರೂರಿ. 1282ರಲ್ಲಿ ಸಿಸಿಲಿಯಲ್ಲಿ ಬಂಡಾಯವಾಯಿತು; ಅದನ್ನು ಹತ್ತಿಕ್ಕುವ ಮೊದಲೇ ಈತ ತೀರಿಕೊಂಡ. ನೇಪಲ್ಸಿನಿಂದ ಸಿಸಿಲಿ ದೀರ್ಘಕಾಲ ಪ್ರತ್ಯೇಕವಾಗಿತ್ತು. 

ಚಾಲ್ರ್ಸ್ II : ನೇಪಲ್ಸಿನ-ಮತ್ತು ನಾಮಮಾತ್ರಕ್ಕೆ ಸಿಸಿಲಿಯ-ದೊರೆ (1289-1309). ಜನನ 1250. 1ನೆಯ ಚಾಲ್ರ್ಸನ ಮಗ. 1284ರಲ್ಲಿ ಸಿಸಿಲಿಯ ಬಂಡಾಯದಲ್ಲಿ ಬಂಧಿತನಾದ. 1288ರಲ್ಲಿ ಇವನ ಬಿಡುಗಡೆಯಾಯಿತು. ಪೋಪ್ ಕಟ್ಟಿದ. ಪೋಪನ ಪ್ರೇರಣೆಯಂತೆ ಸಿಸಿಲಿಯನ್ನು ಗೆಲ್ಲಲು ಈತ ಮಾಡಿದ ಯತ್ನಗಳೆಲ್ಲ ವ್ಯರ್ಥವಾದುವು. 1302ರಲ್ಲಿ ಸಿಸಿಲಿಯ ಮೇಲೆ ಅರಗಾನ್ ಮನೆತನದವರ ಹಕ್ಕನ್ನು ಈತ 1302ರಲ್ಲಿ ಮಾನ್ಯ ಮಾಡಿದ. ಇವನ ಅನಂತರ ಇವನ ಮಗ ರಾಬರ್ಟನಿಗೆ ನೇಪಲ್ಸಿನ ದೊರೆಯ ಪಟ್ಟವಾಯಿತು.				(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ